Wednesday, January 28, 2009

ಕಲಾಂರಿಂದ ಚಂದ್ರಯಾನ ಪುಸ್ತಕ ಬಿಡುಗಡೆ


ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಚಂದ್ರಯಾನ ಪುಸ್ತಕವನ್ನು ನವದೆಹಲಿಯಲ್ಲಿ ಜನವರಿ 27 ರಂದು ಬಿಡುಗಡೆ ಮಾಡಿದರು. ದಿ ವೀಕ್ ರೆಸಿಡೆಂಟ್ ಎಡಿಟರ್ ಸಚ್ಚಿದಾನಂದ ಮೂರ್ತಿ ಹಾಗೂ ಶಿವಪ್ರಸಾದ್ ಉಪಸ್ಥಿತರಿದ್ದಾರೆ.



ನವದೆಹಲಿ, ಜ. 27: ಚಂದ್ರನ ಮೇಲೆ ಮನುಷ್ಯ ಹೋಗಬಹುದು ಎಂದು 1860 ರಷ್ಟು ಹಿಂದೆಯೇ ಕಾನ್ಸ್ಟಾಂಟಿನ್ ಟಿಶೆಲ್ಸ್ ಎಂಬ ವ್ಯಕ್ತಿ ನಿಖರವಾಗಿ ಊಹಿಸಿ ಹೇಳಿದ್ದ ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಇಂದು ಇಲ್ಲಿ ಹೇಳಿದರು.
ಅವರು, ಪತ್ರಕರ್ತ ಶಿವಪ್ರಸಾದ್ ಬರೆದಿರುವ ಚಂದ್ರಯಾನ ಪುಸ್ತಕವನ್ನು ಮಂಗಳವಾರ ನವದೆಹಲಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
ಕಾನ್ಸ್ಟಾಂಟಿನ್ ಕಿವುಡನಾಗಿದ್ದ. ಆದರೆ ಅಧ್ಯಯನದಲ್ಲಿ ಅತೀವ ಆಸಕ್ತಿ ಹೊಂದಿದ್ದ. ತನ್ನ ಅಧ್ಯಯನದಿಂದ ವಿವಿಧ ಸಮೀಕರಣಗಳನ್ನು ರಚಿಸಿದ್ದ. ಆ ಮೂಲಕ ಚಂದ್ರನ ಮೇಲೆ ಮನುಷ್ಯ ಹೋಗಬಹುದು ಎಂದು ತಿಳಿಸಿದ್ದ. ಇಂದು ಆತನ ಊಹೆ ನಿಜವಾಗಿದೆ. ನಾವು ಚಂದ್ರನ ಮೇಲೆ ಹೊಗಿ ಬಂದಿದ್ದೇವೆ. ಹೀಗಾಗಿ ಚಂದ್ರಯಾನದ ಕಲ್ಪನೆಯ ಜನಕ ಕನ್ಸ್ಟಾಂಟಿನ್ ಎಂದರು.
ಪುಸ್ತಕ ಬಿಡುಗಡೆ ಮಾಡಿದ ನಂತರ ಪ್ರಥಮ ಪ್ರತಿಯನ್ನು ದಿ ವೀಕ್ ನ ಸ್ಥಾನಿಕ ಸಂಪಾದಕರಾದ ಕೆ.ಎಸ್. ಸಚ್ಚಿದಾನಂದ ಮೂರ್ತಿ ಅವರಿಗೆ ನೀಡಿದರು. ನಂತರ ಪುಸ್ತಕದಲ್ಲಿನ ವಿವಿಧ ಅಧ್ಯಾಯಗಳ ಬಗ್ಗೆ ಮಾಹಿತಿ ಪಡೆದರು.
ಚಂದ್ರಯಾನ ಉಡ್ಡಯನದ ನಂತರ ಅಮೇರಿಕಾದ ನಾಸಾ, ಒಬಾಮಾ ನೀಡಿದ್ದ ಪ್ರತಿಕ್ರಿಯೆ ಹಾಗೂ ಆ ಬಗ್ಗೆ ಮಾಧವನ್ ನಾಯರ್ ನೀಡಿದ್ದ ವಿವರಣೆ ಇರುವ ಅಧ್ಯಾಯವನ್ನು ಲೇಖಕ ಶಿವಪ್ರಸಾದ್ ಅವರಿಂದ ಓದಿಸಿ, ವಿವರಣೆ ಪಡೆದರು.
ನಂತರ ಮತ್ತೋರ್ವ ಪತ್ರಕರ್ತ ವಿನಾಯಕ್ ಭಟ್ ಬರೆದಿದ್ದ ದಿ ಗ್ರೇಟ್ ಮೂನ್ ಹೋಕ್ಸ್-1835 ಅಧ್ಯಾಯದ ಬಗ್ಗೆಯೂ ವಿವರಣೆ ಪಡೆದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿನಾಯಕ್ ಭಟ್ ಅವರಿಗೆ ಅವರ ಲೇಖನದಲ್ಲಿದ್ದ ಫೋಟೋ ತೋರಿಸಿ, ಈ ಬಗ್ಗೆ ವಿವರಣೆ ಕೇಳಿ ಆನಂದಿಸಿದರು.
'ಚಂದ್ರಯಾನ ಪುಸ್ತಕ ಬರೆಯಲು ಒಂದು ವರ್ಷ ತೆಗೆದುಕೊಂಡಿದ್ದೀರಿ. ಐತಿಹಾಸಿಕ ಯೋಜನೆಯಾದ ಚಂದ್ರಯಾನ ಕುರಿತ ಸಮಗ್ರ ವಿವರ ಇರುವ ಪುಸ್ತಕವನ್ನು ಹೊರ ತಂದಿರುವುದು ಉತ್ತಮ ಪ್ರಯತ್ನ' ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ 'ಪ್ರಜಾವಾಣಿ' ವಿಶೇಷ ಪ್ರತಿನಿಧಿ ದಿನೇಶ್ ಅಮಿನ್ ಮಟ್ಟು, 'ಡೆಕ್ಕನ್ ಹೆರಾಲ್ಡ್' ಸ್ಥಾನಿಕ ಸಂಪಾದಕ ಬಿ.ಎಸ್. ಅರುಣ್, 'ವಿಜಯ ಕರ್ನಾಟಕ' ದೆಹಲಿ ಪ್ರತಿನಿಧಿ ವಿನಾಯಕ್ ಭಟ್, ಕರ್ನಾಟಕ ವಾರ್ತಾ ಕೇಂದ್ರದ ಸಹಾಯಕ ನಿರ್ದೆಶಕ ವೀರಣ್ಣ ಕಮ್ಮಾರ, ಸುವರ್ಣ ಚಾನೆಲ್ ವರದಿಗಾರ ಪ್ರಶಾಂತ್ ನಾತೂ ಉಪಸ್ಥಿತರಿದ್ದರು.

Monday, January 26, 2009

ಪದ್ಮ ವಿಭೂಷಿತ ನಾಯರ್


ಚಂದ್ರಯಾನ ರೂವಾರಿ, ಇಸ್ರೊ ಅಧ್ಯಕ್ಷ ಮಾಧವನ್ ನಾಯರ್ ಅವರಿಗೆ ಭಾರತ ಸರಕಾರ 2009 ನೇ ಸಾಲಿನ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಚಂದ್ರಯಾನದ ಯಶಸ್ಸು ಇಡೀ ದೇಶದ ಯುವ ಮನಸ್ಸುಗಳ ಮೈ ಮನಸುಗಳನ್ನು ಬಡಿದೆಬ್ಬಿಸಿದೆ. ವಿದ್ಯಾರ್ಥಿಗಳನ್ನು ವಿಜ್ಞಾನದೆಡೆಗೆ ಸೆಳೆದಿದೆ. ಚಂದ್ರಯಾನದ ಯಶಸ್ಸು ಇಡೀ ದೇಶದ ವಿಜ್ಞಾನ ಕ್ಷೇತ್ರವನ್ನೇ ಬದಲಿಸಲಿದೆ. ಈ ಯೋಜನೆಯ ಯಶಸ್ಸು ಹೊತ್ತಿದ್ದ ನಾಯರ್ ಅವರಿಗೆ ಈ ಪ್ರಶಸ್ತಿ ದೊರೆತಿರುವುದು ಸಂತೋಷ. ಇದು ಇಸ್ರೊದ ಎಲ್ಲಾ ವಿಜ್ಞಾನಿಗಳಿಗೆ ಸಂದ ಗೌರವ.
ಮಾಧವನ್ ನಾಯರ್ ಹಾಗೂ ಚಂದ್ರಯಾನ ವಿಜ್ಞಾನಿಗಳ ತಂಡಕ್ಕೆ ಅಭಿನಂದನೆಗಳು.
ಮಾಧವನ್ ನಾಯರ್ ಅವರ ಕುರಿತು ಹೆಚ್ಚಿನ ವಿವರಗಳಿಗೆ ಇಲ್ಲಿ http://www.isro.org/mnair/index.htm ಕ್ಲಿಕ್ ಮಾಡಿ.

Friday, January 16, 2009

ನಿಮಗೆ ೫೦೦ ರೂ. ಕೊಟ್ರೆ ಏನು ಮಾಡ್ತೀರಾ??

ನಮ್ಮಲ್ಲಿ 500 ರೂ. ಕೊಟ್ಟು ಹೇರ್ ಕಟಿಂಗ್ ಮಾಡಿಸುವವರಿದ್ದಾರೆ.
ನಮ್ಮಲ್ಲಿ 500 ರೂ. ಕೊಟ್ಟು ಥಂಡಾ ಬಿಯರ್ ಹೀರುವವರಿದ್ದಾರೆ.
ನಮ್ಮಲ್ಲಿ 500 ರೂ. ಟಿಪ್ಸ್ ಕೊಟ್ಟು ಎದ್ದು ಬರುವವರಿದ್ದಾರೆ.
ವ್ಯಾಲಂಟೈನ್ ಡೇ ಬಂದರೆ 500 ರೂ. ಏನು? 50,000 ಖರ್ಚು ಮಾಡುವವರಿಗೇನೂ ಕಡಿಮೆ ಇಲ್ಲ.
ಆದರೆ 500 ರೂ. ನಿಜವಾದ ಬೆಲೆ ಏನು?
ಈ 500 ರೂ. ಓದುವ ಆಸೆ ಇರುವ ಯಾವುದೋ ಬಡ ಮಗುವಿನ ಶಾಲೆಯ ಫೀಜ್ ಆಗಬಹುದು.
ಈ ಬಗ್ಗೆ ಚಿಂತನೆಗೆ ಹಚ್ಚುವ ತುಂಬಾ ಸರಳ,ಸುಂದರ ವಿಡಿಯೋ ಇಲ್ಲಿದೆ. ಇದನ್ನು ಪೂನಾದಲ್ಲಿರುವ ಸೆಂಟರ್ ಫಾರ್ ಕಮ್ಯುನಿಕೇಷನ್ ಅಂಡ್ ಡೆವಲಪ್ ಮೆಂಟ್ ಸ್ಟಡೀಸ್ ತಯಾರಿಸಿ ಇಂಟರ್ ನೆಟ್ ನಲ್ಲಿ ಹಾಕಿದೆ.
ನೀವೂ ನೋಡಿ.
ಇತರರಿಗೂ ತೋರಿಸಿ.

Tuesday, January 13, 2009

ಅಪರೂಪದ ಮಾಹಿತಿ ರವಾನಿಸುತ್ತಿರುವ ಚಂದ್ರ್ರಯಾನ:

ಚಂದ್ರನ 3-ಡಿ ಚಿತ್ರ
ಅಕ್ಟೋಬರ್ ತಿಂಗಳಲ್ಲಿ ಹಾರಿ ಬಿಟ್ಟಿರುವ ಚಂದ್ರಯಾನ ಇದುವರೆಗೆ ಚಂದ್ರನ ಎಷ್ಟು ಚಿತ್ರಗಳನ್ನು ಕಳುಹಿಸಿರಬಹುದು? 1000, 2000, 5000, 10,000?ಊಹ್ಞೂಂ! ಚಂದ್ರಯಾನ ಇದುವರೆಗೆ 40 ಸಾವಿರಕ್ಕೂ ಹೆಚ್ಚು ಚಿತ್ರಗಳನ್ನು ರವಾನಿಸಿದೆ. ಇಸ್ರೊದ ಅಧ್ಯಕ್ಷ ಮಾಧವನ್ ನಾಯರ್ ಸ್ವತ: ಈ ವಿಷಯವನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲ! ಚಂದ್ರನ ಮೇಲ್ಮೈಯ ಸಂಪೂರ್ಣವಾದ 3-ಡಿ ಚಿತ್ರೀಕರಣವನ್ನೂ ಸಹ ಮಾಡಲಾಗಿದೆ.
ಮತ್ತೊಂದು ಸಂತಸದ ವಿಷಯ ಎಂದರೆ ಇದೇ ಮೊದಲ ಬಾರಿಗೆ ಈ ರೀತಿ ಚಂದ್ರನ ಮೇಲ್ಮೈಯ ಸಂಪೂರ್ಣವಾದ ಚಿತ್ರಣ ಲಭ್ಯವಾಗುತ್ತಿರುವುದು. ಈ ಹಿಂದೆ ಚಂದ್ರನಲ್ಲಿಗೆ ಅನೇಕ ದೇಶಗಳು ತಮ್ಮ ಉಪಗ್ರಹಗಳನ್ನು ಕಳುಹಿಸಿ ಫೋಟೋ ತೆಗೆದಿದ್ದರೂ, ಚಂದ್ರಯಾನದಷ್ಟು ಮಾಹಿತಿಯನ್ನು, ಚಂದ್ರನ ಸಂಪೂರ್ಣ ಚಿತ್ರಣವನ್ನು ಅವು ನೀಡಿರಲಿಲ್ಲ. ಇನ್ನು ಗುಣಮಟ್ಟದಲ್ಲೂ ಚಂದ್ರಯಾನ ಕಳುಹಿಸುತ್ತಿರುವ ಚಿತ್ರಗಳಿಗೆ ಸಾಟಿ ಇಲ್ಲ! ಈ ಚಿತ್ರಗಳನ್ನು ಆಧರಿಸಿ, ಚಂದ್ರನ ಮೇಲ್ಮೈ, ಅಲ್ಲಿರುವ ಖನಿಜಗಳ ಅಧ್ಯಯನ ನಡೆಯುತ್ತಿದೆ. ದಿನಗಳೆದಂತೆ ಇನ್ನೂ ಹೆಚ್ಚಿನ ಹಾಗೂ ಅಪರೂಪದ ಮಾಹಿತಿ ಲಭ್ಯವಾಗುತ್ತಾ ಹೋಗುತ್ತದೆ.
ಚಂದ್ರನ ಕುರಿತ ಇನ್ನೂ ಯಾವ ಯಾವ ರಹಸ್ಯಗಳ ಅನಾವರಣ ಆಗುತ್ತದೋ ಗೊತ್ತಿಲ್ಲ!

Friday, January 9, 2009

11 ಸಲಹೆಗಳು

ಚಂದ್ರಯಾನದ ಯಶಸ್ಸು ಇಡೀ ದೇಶದ ಮಕ್ಕಳ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ವಿಜ್ಞಾನದೆಡೆಗೆ ಆಸಕ್ತಿ ಮೂಡುವಂತೆ ಮಾಡಿದೆ. ಇದರ ಪರಿಣಾಮ ಇತ್ತೀಚೆಗೆ ನಡೆದ ವಿಜ್ಞಾನ ಸಮ್ಮೇಳನದಲ್ಲೂ ಕಂಡು ಬಂದಿದೆ.ಇತ್ತೀಚೆಗೆ ಶಿಲ್ಲಾಂಗ್ನಲ್ಲಿ ನಡೆದ 96 ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ನಲ್ಲಿ ವಿಜ್ಞಾನದ ಅಭಿವೃದ್ಧಿ ಬೆಳವಣಿಗೆ ಹಾಗೂ ಹೆಚ್ಚಿನ ಮಕ್ಕಳಲ್ಲಿ ವಿಜ್ಞಾನದೆಡೆಗೆ ಆಸಕ್ತಿ ಮೂಡುವಂತೆ ಮಾಡಲು 11 ಸಲಹೆಗಳನ್ನು ಕೇಂದ್ರ ಸರಕಾರಕ್ಕೆ ನೀಡಲಾಗಿದೆ.
ಆ 11 ಸಲಹೆಗಳ ಸಂಕ್ಷಿಪ್ತ ನೋಟ ಇಲ್ಲಿದೆ.

Sunday, January 4, 2009

ಚಂದ್ರೋದಯ ವಾಣಿ

ಉದಯವಾಣಿಯಲ್ಲಿ ಪ್ರಕಟವಾಗಿರುವ ಚಂದ್ರಯಾನ ಪುಸ್ತಕ ಪರಿಚಯ

Thursday, January 1, 2009

ಚಂದ್ರನ ಚಿತ್ರಗಳು

ಚಂದ್ರಯಾನದಲ್ಲಿರುವ ಟಿಎಂಸಿ ಉಪಕರಣ ತೆಗೆದ ಭೂಮಿಗೆ ಕಾಣದ ಚಂದ್ರನ ಮತ್ತೊಂದು ಬದಿಯ ಚಿತ್ರ.
ಎಚ್ ವೈ ಎಸ್ ಐ ಉಪಕರಣ ತೆಗೆದ ಚಂದ್ರನ ಮತ್ತೊಂದು ಬದಿಯ ಚಿತ್ರ.
ಚಂದ್ರನ ಮೇಲ್ಮೈಯ ಇನ್ನೂ ಮೂರು ಚಿತ್ರಗಳು.
ಅಂದಹಾಗೆ ಈ ಚಿತ್ರದಲ್ಲಿ ಕಾಣುವ ಚಂದ್ರನ ಮೇಲ್ಮೈ ಭಾಗ ಎಷ್ಟು ಕಿ.ಮಿ.ಉದ್ದ ಇದೆ ಗೊತ್ತೆ?
ಕೇವಲ 395ಕಿ.ಮಿ.!!

ಗಮನಕ್ಕೆ: ದೊಡ್ಡ ಚಿತ್ರಗಳನ್ನು ವೀಕ್ಷಿಸಲು ಆಯಾ ಚಿತ್ರದ ಮೇಲೆ ಕ್ಲಿಕ್ ಮಾಡಿ.