Monday, January 11, 2010

Thursday, December 31, 2009

ಶ್ರೀಕೃಷ್ಣದೇವರಾಯ

ಸ್ನೇಹಿತರೆ,
ನನ್ನ 5 ನೇ ಪುಸ್ತಕ ಶ್ರೀಕೃಷ್ಣದೇವರಾಯ ಬಿಡುಗಡೆಗೆ ಸಿದ್ಧವಾಗಿದೆ. ಪುಸ್ತಕದ ಬಿಡುಗಡೆ ಸಮಾರಂಭದ ಆಹ್ವಾನ ಪತ್ರಿಕೆ ಮತ್ತು ಮುಖಪುಟಗಳು ಇಲ್ಲಿವೆ. ಬಿಡುವು ಮಾಡಿಕೊಂಡು ಬನ್ನಿ.



Friday, May 1, 2009

ಮಿಥಿಕ್ ಸೊಸೈಟಿ 100 ಹಾಗೂ ಪ್ರಶಸ್ತಿ

ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಮಿಥಿಕ್ ಸೊಸೈಟಿ ಇದೇ ಮೇ 3 ರಿಂದ 5 ನೇ ತಾರೀಖಿನವರೆಗೆ ಮೂರು ದಿನಗಳ ಸಮಾರೋಪ ಸಮಾರಂಭ ಆಚರಿಸುತ್ತಿದೆ.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 7 ಜನ ಹಿರಿಯರನ್ನು ಹಾಗೂ 7 ಜನ ಯುವ ಸಾಧಕರನ್ನು ಗುರುತಿಸಿ, ಪ್ರಶಸ್ತಿ ನೀಡಿ ಗೌರವಿಸಲಿದೆ. ಯುವ ಸಾಧಕರ ಪಟ್ಟಿಯಲ್ಲಿ ನನ್ನ ಹೆಸರೂ ಇದೆ.

ಉಳಿದಂತೆ ಎಲ್ಲಾ ಪ್ರಶಸ್ತಿ ವಿಜೇತರ ಪಟ್ಟಿ ಹಾಗೂ ಕಾರ್ಯಕ್ರಮದ ವಿವರಣೆ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. ಅದರ ಸುದ್ದಿ ತುಣುಕು ಇಲ್ಲಿದೆ.

ಗಮನಕ್ಕೆ: ದೊಡ್ಡ ಇಮೇಜ್ ಗೆ ಫೋಟೋ ಮೇಲೆ ಕ್ಲಿಕ್ ಮಾಡಿ.

Tuesday, April 21, 2009

ಜಲಿಯನ್ ವಾಲಾ ಬಾಗ್ ವಿಡಿಯೊಗಳು

ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಕುರಿತ ಅನೇಕ ವಿಡಿಯೋ ಕ್ಲಿಪ್ಪಿಂಗ್ ಗಳಿವೆ. ಇವೆಲ್ಲ ಬೇರೆ ಬೇರೆ ಸಿನಿಮಾಗಳು, ಡಾಕ್ಯುಮೆಂಟರಿಗಳಿಂದ ಆಯ್ಕೆ ಮಾಡಿದವು. ಹತ್ಯಾಕಾಂಡಕ್ಕೆ ಉಧಮ್ ಸಿಂಗ್ 21 ವರ್ಷದ ನಂತರ ಸೇಡು ತೀರಿಸಿಕೊಂಡಿದ್ದ. ಆತನ ಬಗ್ಗೆ ಬಿಬಿಸಿ ತಯಾರಿಸಿದ್ದ 30 ನಿಮಿಷದ ಸಾಕ್ಷ್ಯಚಿತ್ರವೂ ಇಲ್ಲಿದೆ. ಈ ಎಲ್ಲವೂ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ನೈಜ ಚಿತ್ರಣ ತೋರಿಸುತ್ತವೆ.























Sunday, April 19, 2009

ಟೀವೀ ನೈನೂ ಮತ್ತು ’ಚಂದ್ರಯಾನ’ವೂ..

(ಇದನ್ನು ವಿಕಾಸ್ ಹೆಗಡೆ ಅವರ 'ವಿಕಾಸ ವಾದ' ಬ್ಲಾಗ್ ನಿಂದ ಎತ್ತಿಕೊಳ್ಳಲಾಗಿದೆ. ಇದರಲ್ಲಿ ಅವರು ತಮ್ಮದೆ ಆದ ವಿಶಿಷ್ಟ ಶೈಲಿಯಲ್ಲಿ ಚಂದ್ರಯಾನ ಹಾಗೂ ಜಲಿಯನ್ ವಾಲಾ ಬಾಗ್ ಪುಸ್ತಕಗಳ ಪರಿಚಯ ಮಾಡಿಕೊಟ್ಟಿದ್ದಾರೆ. ನಿಮಗಾಗಿ ಅದನ್ನು ಇಲ್ಲಿ ಮರು ಪ್ರಕಟಿಸಲಾಗಿದೆ)


ನಿನ್ನೆ ರಾತ್ರಿ ೧೦:೩೦, ಅಪ್ಪನ ಫೋನಿಂದ ಮೆಸೇಜು ಬಂತು - "ನಿನ್ನನ್ನ TV9ನಲ್ಲಿ ನೋಡಿದೆವು! "
ಎದೆ ಧಸಕ್ ಎಂದಿತು. ಚಂದನದಲ್ಲೋ, ಕಸ್ತೂರಿಯಲ್ಲೋ, ಈ ಟೀವಿಯಲ್ಲೋ ನೋಡಿದೆ ಎಂದಿದ್ದರೆ ಏನಾಗುತ್ತಿರಲಿಲ್ಲ. ಆದರೆ ಹೇಳಿ ಕೇಳಿ ಅದು ಟೀವಿ ನೈನು! ಸುದ್ದಿಯನ್ನು ಮನರಂಜನೆಯಂತೆ ಕೊಟ್ಟು, ಮನರಂಜನೆಯನ್ನು ಅತಿರೇಕ ಮಾಡಿ, ಅತಿರೇಕವನ್ನು ಮಾಮೂಲಿನಂತೆ ದಿನವಿಡೀ ತೋರಿಸಿ ’ಉತ್ತಮ ಸಮಾಜಕ್ಕಾಗಿ’ ದುಡಿಯುತ್ತಿರುವ ಅಪರೂಪದ ವಾಹಿನಿ ಅದು. ಅಂದ ಮೇಲೆ ಗಾಬರಿಯಾಗದೇ ಇರುತ್ತದೆಯೇ. ಅವರ ಕ್ಯಾಮೆರಾ ಎಲ್ಲೆಲ್ಲಿ ಇರುತ್ತದೋ ಯಾರಿಗೆ ಗೊತ್ತು. ನಾವು ಹುಡುಗರು ಎಲ್ಲೆಲ್ಲೋ ನಿಂತಿರುತ್ತೇವೆ, ಏನೇನೋ ಮಾಡುತ್ತಿರುತ್ತೇವೆ. ಇನ್ಯಾವುದೋ ವರದಿಯ ಸಂದರ್ಭದಲ್ಲಿ ಅಕಸ್ಮಾತಾಗಿಯೋ , ಉದ್ದೇಶಪೂರ್ವಕವಾಗಿಯೋ ನಮ್ಮ ಮೇಲೆ ಕ್ಯಾಮೆರಾ ಕಣ್ಣು ಬಿದ್ದು ಅದು ಬೇರೆ ಏನೋ ಅರ್ಥ ಕೊಟ್ಟು ಬ್ರೇಕಿಂಗ್ ನ್ಯೂಸ್ ಆಗಿಹೋಯಿತಾ ಎಂದು ಹೆದರಿಕೆಯಾಯಿತು.

ರೆಹಮಾನ್, ಆ ಹುಡುಗ್ರು ಅಲ್ಲಿ ಎಷ್ಟೊತ್ತಿಂದ ನಿಂತಿದಾರೆ?
.................................
ಅವರ ಕೈಯಲ್ಲಿ ಏನೋ ವೈಟ್ ಕಲರ್ ವಸ್ತು ಇದೆಯಲ್ಲ, ಅದು ಏನೂಂತ ಹೇಳಕ್ಕಾಗತ್ತಾ?
.................................
ಅವರು ಇನ್ನೂ ಅಲ್ಲೇ ಎಷ್ಟು ಹೊತ್ತು ನಿಂತಿರ್ತಾರೆ ಅಂತ ಹೇಳ್ತೀರಾ
...............

ಹೀಗೆಲ್ಲಾ ಅವರ ವರದಿಗಾರ-ಸ್ಟುಡಿಯೋ ಮಧ್ಯೆ ಸಂಭಾಷಣೆ ಕಲ್ಪಿಸಿಕೊಂಡು ದಿಗಿಲಾದೆ. ಯಾವುದಕ್ಕೆ ಏನು ರೆಕ್ಕೆಪುಕ್ಕ ಸೇರಿಸಿ, ಮಸಾಲೆ ಅರೆದು, ಬಣ್ಣ ಹಚ್ಚಿ ತೋರಿಸಿಬಿಡುತ್ತಾರೋ ಯಾರಿಗೆ ಗೊತ್ತು ನಮ್ ಗ್ರಾಚಾರ! :)

ಕೆಲವರ್ಷಗಳ ಹಿಂದೆ ಹೀಗೇ ಆಗಿತ್ತು. ನಾನು ಮೊದಲು ಕೆಲಸ ಮಾಡುತ್ತಿದ್ದ ಕಂಪನಿಯ ಕ್ಯಾಂಪಸ್ಸಿನಲ್ಲೇ ಕಾಲ್ ಸೆಂಟರ್ ಒಂದಿತ್ತು. ಆಗ ಅದ್ಯಾವುದೋ ಕಾಲ್ ಸೆಂಟರ್ ಹುಡುಗಿಯನ್ನು ಕ್ಯಾಬ್ ಚಾಲಕನೊಬ್ಬ ಎತ್ತಾಕಿಕೊಂಡು ಹೋಗಿ ರೇಪ್ & ಕೊಲೆ ಮಾಡಿದ ಘಟನೆ ಹಸಿಹಸಿಯಾಗಿತ್ತು. ಕ್ರೈಂ ಡೈರಿ, ಸ್ಟೋರಿ ಮುಂತಾದ ಕ್ಯಾಮೆರಾಗಳು ಕಾಲ್ ಸೆಂಟರ್ ಗಳ ಹಿಂದೆ ಬಿದ್ದಿದ್ದವು. ನಮಗೂ ಎರಡನೇ ಪಾಳಿ ಇರುತ್ತಿದ್ದುದ್ದರಿಂದ ರಾತ್ರಿ ೧ ರ ವರೆಗೆ ಆಫೀಸಿನಲ್ಲೇ ಇರಬೇಕಾಗುತ್ತಿತ್ತು. ಆಗಾಗ ಗಾಳಿ ಸೇವನೆಗೆಂದು, ನಿದ್ದೆ ಬರದಿರಲೆಂದು ನಾವು ಹೊರಗೆ ಹೋಗುತ್ತಿದ್ದೆವು. ಅದೇ ಜಾಗಕ್ಕೆ ಕಾಲ್ ಸೆಂಟರಿನ ಹುಡುಗ ಹುಡುಗಿಯರೂ ಬರುತ್ತಿದ್ದರು.

ಆ ಹುಡುಗಿಯರ ಅಸ್ತವ್ಯಸ್ತ ಬಟ್ಟೆಗಳು, ಅವರು ಸೇದುತ್ತಿದ್ದ ಪ್ಯಾಕುಗಟ್ಟಲೇ ಸಿಗರೇಟುಗಳು, ಯಾವ ಮುಲಾಜೂ ಇಲ್ಲದಂತೆ ಹುಡುಗಿಯರ ಮೈಮೇಲೆ ಎಲ್ಲೆಲ್ಲೋ ಹರಿದಾಡುತ್ತಿದ್ದ ಹುಡುಗರ ಕೈಗಳು, ಮಬ್ಬುಗತ್ತಲಲ್ಲಿ ಪರಸ್ಪರ ದಾಹ ತೀರಿಸಿಕೊಳ್ಳುತ್ತಿದ್ದ ತುಟಿಗಳು, ಚಳಿಗಾಲದ ಹೀಟ್ ಟ್ರಾನ್ಸ್ ಫರ್ ಗಳು ಎಲ್ಲವನ್ನೂ ಸುತ್ತಮುತ್ತಲೇ ನೋಡುತ್ತಿದ್ದೆವು. ಎಥ್ನಿಕ್ ಡೇ ಹೆಸರಲ್ಲಿ ಕಾಲ್ ಸೆಂಟರ್ ಹುಡುಗೀರು ಸೀರೆ ಉಟ್ಟುಕೊಂಡು ಬಂದಾಗ ಮಾತ್ರ ನಮಗೆ ಬಹಳ ಸಂಕಟವಾಗುತ್ತಿತ್ತು. ಅದ್ಯಾಕೆ ನೆಟ್ಟಗೆ ಸೀರೆ ಉಟ್ಟುಕೊಂಡು ಬರುತ್ತಿರಲಿಲ್ವಾ ಅಂತೀರಾ? ಇಲ್ಲ ಹಾಗೇನಿಲ್ಲ , ಪಾಪ ಸರಿಯಾಗೇ ಸೀರೆ ಉಟ್ಟುಕೊಂಡೇ ಬಂದಿರ್ತಿದ್ರು, ಆದರೆ ಹುಡುಗೀರು ಸೀರೆ ಉಟ್ಟುಕೊಂಡು ಸಿಗರೇಟ್ ಸೇದುವುದನ್ನು ನೋಡೋಕಾಗೋಲ್ಲ ಕಣ್ರೀ. ಬೇಕಿದ್ರೆ ಜೀನ್ಸ್ ಟೀಶರ್ಟ್ ಅಥವಾ ಇನ್ನೇನನ್ನೋ ಹಾಕಿಕೊಂಡು ಸೇದಿದರೆ ಅದು ನೋಡೆಬಲ್.

ನೀವು ಹುಡುಗರು ಯಾವ ಬಟ್ಟೆ ಬೇಕಿದ್ರೂ ಹಾಕಿಕೊಂಡು ಏನ್ ಬೇಕಾದ್ರೂ ಮಾಡ್ತೀರಾ, ಹುಡುಗಿಯರಿಗೆ ಮಾತ್ರ ಕಟ್ಟು ಪಾಡು, ಶೋಷಣೆ, ದೌರ್ಜನ್ಯ ಅದು ಇದು ಅಂತ ಸ್ತ್ರೀವಾದಿಗಳು ಮೂದಲಿಸಿದರೂ ಪರ್ವಾಗಿಲ್ಲ, ಸೀರೆ ಉಟ್ಟುಕೊಂಡರೆ ಸಭ್ಯರೆಂಬ ಭಾವನೆಯೋ ಅಥವಾ ಸೀರೆ ಉಟ್ಟಿರುವವರೆಲ್ಲಾ ಅಮ್ಮಂದಿರಂತೆ ಎಂಬ ಮುಗ್ಧತೆಯೋ ಗೊತ್ತಿಲ್ಲ, ನಮಗೆ ಆ ಸೀರೆ ಮೇಲೆ ಚಿಕ್ಕಂದಿನಿಂದ ಏನೋ ಗೌರವ. ಇರ್ಲಿ ಬಿಡಿ. ಯಾರಿಗೂ ಏನೂ ಹೇಳುವ ಹಾಗಿಲ್ಲ, ಎಲ್ಲರೂ ೨೧ ನೇ ಶತಮಾನದವರರು, modern, forward, broad minded and independent. They know what is right and wrong. They don't want moral policing by anybody.

ಇದೇನು ಇಂಗ್ಲೀಷ್ ಬಂತು ಮಧ್ಯದಲ್ಲಿ !. ಹೋಗ್ಲಿ ಬಿಡಿ.. ಅದೆಲ್ಲ ವಿಷ್ಯ ಬೇಡ ಈಗ .

ನಮ್ಮ ತಲೆಬಿಸಿ ಇದ್ದದ್ದು ಟೀವಿ ಕ್ಯಾಮೆರಾಗಳ ಬಗ್ಗೆ ಮಾತ್ರ. ಅವರು ಎಲ್ಲೋ ಕ್ಯಾಮೆರಾ ಇಟ್ಟು ಫೋಕಸ್ ಮಾಡಿ ಕಾಲ್ ಸೆಂಟರ್ ಜನರ ಜೊತೆ ನಮ್ಮನ್ನೂ ಸೇರಿಸಿ ಟೀವಿನಲ್ಲಿ ತೋರಿಸಿ ಅದನ್ನು ನಮ್ಮೂರಲ್ಲೆಲ್ಲಾ ನೋಡಿ ಫಜೀತಿಯಾಗಿ ಬಿಡುತ್ತದೆ ಎಂಬ ಭಯ ಇತ್ತು. ಈ ಬ್ಲಾಗ್, ಇಂಟರ್ನೆಟ್ ನಲ್ಲೆಲ್ಲಾ ಏನೇ ಬರೆದುಕೊಂಡರೂ ಪರ್ವಾಗಿಲ್ಲ , ಯಾರೂ ಓದಲ್ಲ. ಆದರೆ ಟೀವಿ ಮಾತ್ರ ಹಾಗಲ್ಲ ನೋಡಿ. :)

ಯಾವುದೋ ವಿಷಯ ಹೇಳಲು ಹೋಗಿ ಏನೋ ಹೇಳುತ್ತಾ ಕೂತೆ. ನೀವೂ ಅದನ್ನು ಓದುತ್ತಾ ಕೂತಿರಿ. ಅಸಲು ವಿಷಯ ಇನ್ಮುಂದಿದೆ.

ಎಲೆಕ್ಟ್ರಾನಿಕ್ ಮಾಧ್ಯಮಗಳ ಈ ಕಾಲದಲ್ಲಿ ನಿನ್ನೆಯ ಸುದ್ದಿ ಇವತ್ತಿಗೆ ಹಳತಾಗಿ ಹೋಗಿರುತ್ತದೆ. ಏನಾದರೂ ಘಟನೆಗಳು ನೆಡೆದಾಗ ಅವು ಹಸಿ ಇರುವಾಗಲೇ ಅದನ್ನು ಸರಿಯಾಗಿ ಬಳಸಿಕೊಳ್ಳುವುದು ಒಳ್ಳೆಯದು. ಇಂಗ್ಲೀಷ್ ಬರವಣಿಗೆಯ ಜಗತ್ತು ಇದನ್ನು ಯಾವತ್ತೋ ಅಳವಡಿಸಿಕೊಂಡಿದೆ. ಆದರೆ ಕನ್ನಡ ಜಗತ್ತು ಈಗೀಗ ಅಳವಡಿಸಿಕೊಳ್ಳುತ್ತಿದೆ. (ಅಥವಾ ಮೊದಲೇ ಅಳವಡಿಸಿಕೊಂಡಿದ್ದರೆ ನನ್ನ ಅಜ್ಞಾನವೆಂದು ಮನ್ನಿಸಿ). ಅಮೆರಿಕಾದಲ್ಲಿ ಟ್ವಿನ್ ಟವರ್ ದುರಂತ ಆದಾಗ ಕೆಲವೇ ತಿಂಗಳುಗಳಲ್ಲಿ ಆ ಘಟನೆಯದ ವಿವರಗಳನ್ನೊಳಗೊಂಡ ಹಲವಾರು ದಪ್ಪ ದಪ್ಪ ಪುಸ್ತಕಗಳು ಬಂದವು. ಆ ಘಟನೆ ಇನ್ನೂ ಜನರ ಮನಸಲ್ಲಿ ಹಸಿಯಿದ್ದುದರಿಂದ ಪುಸ್ತಕಗಳು ಬಿಸಿಬಿಸಿಯಾಗಿ ಖರ್ಚಾದವು. ಕನ್ನಡದಲ್ಲೂ ಕೂಡ ಮೊನ್ನೆ ಮೊನ್ನೆ ದೈತ್ಯ ಬರಹಗಾರ ರವಿ ಬೆಳಗೆರೆಯವರು ಮುಂಬೈ ಘಟನೆಯನ್ನು ವಿಷಯವಾಗಿರಿಸಿಕೊಂಡು ’ಮೇಜರ್ ಸಂದೀಪ್ ಹತ್ಯೆ’ ಎಂಬ ಪುಸ್ತಕ ಬರೆದು ಬಿಡುಗಡೆ ಮಾಡಿದರು. ಇದು ಭಾವನೆಗಳನ್ನು encash ಮಾಡಿಕೊಳ್ಳುವುದು ಎಂದು ಕೆಲವರು ಟೀಕಿಸಿದರೂ ಕೂಡ ಅಂತಹ ಘಟನೆಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳಲು, ಜನರ ಮನಸಲ್ಲಿ ಇಳಿಯಲು ಸಹಕಾರಿಯಾಗುತ್ತವೆ.

ಈಗ ’ಚಂದ್ರಯಾನ’ದ ವಿಷಯಕ್ಕೆ ಬರೋಣ. ಕೆಲ ತಿಂಗಳುಗಳ ಹಿಂದೆ ನಮ್ಮ ವಿಜ್ಞಾನಿಗಳು ಚಂದ್ರಯಾನ-೧ ಯೋಜನೆಯನ್ನು ಯಶಸ್ವಿಯಾಗಿ ಕೈಗೊಂಡರು. ಇದು ಭಾರತದ ಹೆಮ್ಮೆಯ ಸಾಧನೆ. ನಿನ್ನೆ ’ಚಂದ್ರಯಾನ’ ಪುಸ್ತಕ ಬಿಡುಗಡೆಯಾಯಿತು. ಟೀವಿ ನೈನ್ ಉದ್ಯೋಗಿ ಶ್ರೀ ಶಿವಪ್ರಸಾದ್ ಮತ್ತು ಮಿತ್ರರು ಇಸ್ರೋ ಚಂದ್ರಯಾನದ ಯೋಜನೆಯ ವಿಷಯವನ್ನಿಟ್ಟುಕೊಂಡು ಪುಸ್ತಕ ಬರೆದಿದ್ದಾರೆ. ಕನ್ನಡ ಬರವಣಿಗೆ ಲೋಕದಲ್ಲಿ ಮಾಹಿತಿ ಸಾಹಿತ್ಯದ ಅಗತ್ಯತೆ ದೃಷ್ಟಿಯಿಂದ ಈ ಪುಸ್ತಕ ನಿಜವಾಗಿಯೂ ಒಂದು ಒಳ್ಳೆಯ ಸಾಮಗ್ರಿಯಾಗಿ ಹೊರಬಂದಿದೆ. ಈ ಪುಸ್ತಕದಲ್ಲಿ ಚಂದ್ರನ ಬಗ್ಗೆ ವಿವರಗಳಿವೆ, ಮತ್ತೊಮ್ಮೆ ದೇಶ ದೇಶಗಳ ನಡುವೆ space race ಶುರುವಾಗಲು ಕಾರಣವಾದ ’ಚಂದ್ರಯಾನ-೧’ ಯೋಜನೆಯನ್ನು ಹಂತ ಹಂತವಾಗಿ ವಿವರಿಸಲಾಗಿದೆ. ಮಾನವ ಚಂದ್ರನ ಮೇಲೆ ಏಕೆ ಅಷ್ಟು ಆಸಕ್ತಿ ತೋರಿಸುತ್ತಿದ್ದಾನೆ, ಚಂದ್ರನನ್ನು ಎಟುಕಿಸಿಕೊಂಡರೆ ಮನುಕುಲಕ್ಕೆ ಮುಂದೆ ಆಗುವ ಪ್ರಯೋಜನಗಳೇನು ಎಂಬುದಕ್ಕೆ ಇದುವರೆಗೂ ಜನಸಾಮಾನ್ಯರಿಗೆ ಗೊತ್ತೇ ಇರದ ರೋಚಕ ವಿಷಯಗಳಿವೆ. ಜೊತೆಗೆ ಭಾರತದ ಬಾಹ್ಯಾಕಾಶ, ಉಪಗ್ರಹ ಕ್ಷೇತ್ರದ ಹುಟ್ಟು ಬೆಳವಣಿಗೆಗಳ ವಿಷಯಗಳು ಮತ್ತು ವಿಶ್ವದ ಬಾಹ್ಯಾಕಾಶದ ಚಟುವಟಿಕೆಗಳ ವಿಷಯಗಳನ್ನೂ ಒಳಗೊಂಡಿದೆ. ಕೇರಳದ ’ತುಂಬಾ’ ಎಂಬ ಅತೀ ಕುಗ್ರಾಮವೊಂದರಲ್ಲಿ ಒಂದು ಹಳೇ ಚರ್ಚನ್ನೇ ಕಛೇರಿ ಮಾಡಿಕೊಂಡು ದನದ ಕೊಟ್ಟಿಗೆಯಲ್ಲಿ ಜೋಡಣೆ ಮಾಡಿ ಸೈಕಲ್ ನಲ್ಲಿ ಸಾಗಿಸಿ ಭಾರತದ ಮೊಟ್ಟ ಮೊದಲ ರಾಕೆಟನ್ನು ಆಕಾಶಕ್ಕೆ ಯಶಸ್ವಿಯಾಗಿ ಹಾರಿಸಿದ ಘಟನೆಯನ್ನು ಓದುತ್ತಾ ಹೋದಂತೆ ಅಕ್ಷರಶಃ ರೋಮಾಂಚನವಾಗುತ್ತದೆ. ದೇಶಕ್ಕೋಸ್ಕರ ಅಮೆರಿಕದ ಉನ್ನತ ಹುದ್ದೆಗಳನ್ನು ತೊರೆದು ಬಂದ ವಿಜ್ಞಾನಿಗಳು, ಇಸ್ರೋ(ISRO) ಸಂಸ್ಥೆಯ ಹುಟ್ಟು, ಬೆಳವಣಿಗೆ ಎಂತವರಲ್ಲೂ ಆಶ್ಚರ್ಯ, ಹೆಮ್ಮೆ ಮೂಡಿಸದೇ ಇರಲಾರದು. ಬಾಹ್ಯಾಕಾಶದ ಬಗ್ಗೆ ವಿವರಗಳು, ಗಗನಯಾತ್ರೆಯ ಒಳಹೊರಗು, ಅಮೆರಿಕಾ - ರಷ್ಯಾ ಶೀತಲ ಸಮರದಿಂದ ಶುರುವಾದ ಸ್ಪರ್ಧೆ, ಚಂದ್ರನ ಬಗ್ಗೆ ಇರುವ ಕಥೆಗಳು, ನಂಬಿಕೆಗಳು, ಇದಕ್ಕೆ ಸಂಬಂಧಪಟ್ಟ ಜಗತ್ತಿನ ಸ್ವಾರಸ್ಯಕರ ಘಟನೆಗಳು ಮುಂತಾದ ಹಲವು ವಿಷಯಗಳಿಂದ ಪುಸ್ತಕವು ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತದೆ.

ಚಂದ್ರಯಾನದಂತಹ ಯೋಜನೆಗಳ ಬಗ್ಗೆ ಜನರಲ್ಲಿ ಆಸಕ್ತಿ, ಗೌರವ ಮೂಡಿಸಲು, ಮಕ್ಕಳನ್ನು, ಯುವಕರನ್ನು ಇಂತಹ ಕ್ಷೇತ್ರಗಳ ಕಡೆಗೆ ಸೆಳೆಯಲು, ಸಂಶೋಧನಾ ಕೆಲಸಗಳ ಬಗ್ಗೆ ಆಸಕ್ತಿ ವಹಿಸುವಂತೆ ಮಾಡಲು ಇಂತಹ ಪುಸ್ತಕಗಳ ಅಗತ್ಯ ಬಹಳ ಇದೆ. ಪ್ರೌಢಶಾಲಾ ಮಟ್ಟದಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರಿಗೂ ಸಹಕಾರಿಯಾಗಬಲ್ಲ, ಅಗತ್ಯವಾಗಿ ಓದಬೇಕಾದ ಪುಸ್ತಕ ಇದು. ಅಬ್ದುಲ್ ಕಲಾಂರವರು ಇದನ್ನು ಮೊದಲೇ ಅನೌಪಚಾರಿಕವಾಗಿ ಬಿಡುಗಡೆ ಮಾಡಿ ಶಭಾಷ್ಗಿರಿ ಕೊಟ್ಟಿದ್ದಾರೆ. ಇಂತಹ ಹೆಚ್ಚು ಹೆಚ್ಚು ಪುಸ್ತಕಗಳು ಬರಲಿ ಎಂದು ಆಸೆ ಪಡೋಣ.

ಇದರ ಜೊತೆಗೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷ ದರ್ಶಿ ನೂರು ವರ್ಷಕ್ಕಿಂತಲೂ ಹಿರಿಯರಾದ ಸುಧಾಕರ ಚತುರ್ವೇದಿಯವರಿಂದ ಶಿವಪ್ರಸಾದ್ ಅವರೇ ಬರೆದಿರುವ ’ಜಲಿಯನ್ ವಾಲಾಬಾಗ್’ ಎಂಬ ಪುಸ್ತಕವೂ ಬಿಡುಗಡೆಯಾಯಿತು. ನಾನಿನ್ನೂ ಓದಿಲ್ಲ.
*******************
ಇಷ್ಟೆಲ್ಲಾ ಮಾತಾಡಿ ಈಗ ಟೀವಿನೈನ್ ನಲ್ಲಿ ಅಪ್ಪ ಅಮ್ಮ ನನ್ನನ್ನು ಕಂಡದ್ದು ಹೇಗೆ ಅಂತಲೇ ಹೇಳಲಿಲ್ಲ ಅಲ್ವೇ?

ನಿನ್ನೆ ಚಂದ್ರಯಾನ ಮತ್ತು ಜಲಿಯನ್ ವಾಲಾಬಾಗ್ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಆಗ ಟೀವಿನೈನ್ ಕ್ಯಾಮರಾ ಪ್ರೇಕ್ಷಕರ ಗುಂಪನ್ನು ತೋರಿಸುವಾಗ ಅಲ್ಲೆಲ್ಲೋ ಮಧ್ಯದಲ್ಲಿ ಕೂತಿದ್ದ ನನ್ನನ್ನು ಕೂಡ ಫೋಕಸ್ ಮಾಡಿಬಿಟ್ಟಿದೆ. ಪುಸ್ತಕ ಬಿಡುಗಡೆ ಸುದ್ದಿಯನ್ನು ರಾತ್ರಿ ’ಜಸ್ಟ್ ಬೆಂಗಳೂರು’ ಎಂಬ ಕಾರ್ಯಕ್ರಮದಲ್ಲಿ ತೋರಿಸಿದ್ದಾರೆ. ಮನೆಯಲ್ಲಿ ಅಪ್ಪ ಅಮ್ಮ ಅದನ್ನು ನೋಡುವಾಗ ನಾನೂ ಅವರ ಕಣ್ಣಿಗೆ ಬಿದ್ದಿದ್ದೇನೆ ಅಷ್ಟೆ.

ಫೋನ್ ಮಾಡಿ ಇಷ್ಟು ವಿಷಯ ತಿಳಿದುಕೊಂಡ ನಂತರ ನಿರಾಳವೆನಿಸಿ ನಿದ್ದೆ ಹೋದೆ. :)

Tuesday, April 14, 2009

ಜಲಿಯನ್ ವಾಲಾ ಬಾಗ್ ಬಗ್ಗೆ ಡಾ.ಸ್ವಾಮೀಜಿ ಬರೆದದ್ದು

ಮೊನ್ನೆ ಬಿಡುಗಡೆಯಾದ ನನ್ನ ಹೊಸ ಪುಸ್ತಕ ಜಲಿಯನ್ ವಾಲಾ ಬಾಗ್ ಪುಸ್ತಕವನ್ನು ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಜಿಯವರಿಗೆ ತಲುಪಿಸಿ, ಅವರ ಆಶೀರ್ವಾದ ಪಡೆದು ಬಂದಿದ್ದೆ. ಈ ಹಿಂದೆ ನಾನು ಬರೆದ ಪುಸ್ತಕಗಳ್ನೂ ಸಹ ಶ್ರೀಗಳವರಿಗೆ ತಲುಪಿಸಿದ್ದೆ. ಆಗೆಲ್ಲಾ ಪುಸ್ತಕಗಳು ಚನ್ನಾಗಿವೆ ಎಂದು ಆಶೀರ್ವದಿಸಿದ್ದರು. ಚಂದ್ರಯಾನ ಪುಸ್ತಕದ ನೂರು ಪ್ರತಿಗಳನ್ನು ತರಿಸಿಕೊಂಡು ತಮ್ಮ ವಿದ್ಯಾಸಂಸ್ಥೆಯ ವಿದ್ಯಾರ್ತಿಗಳಿಗೆ ನೀಡಿದ್ದರು.
ಈಗ ಜಲಿಯನ್ ವಾಲಾ ಬಾಗ್ ಬಗ್ಗೆ ಗುರುಗಳು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಕೇವಲ ನನಗೊಬ್ಬನಿಗೆ ಮಾತ್ರವಲ್ಲ, ವಿಜಯ ಕರ್ನಾಟಕ ಪತ್ರಿಕೆಯ ತಮ್ಮ ಬಿಸಿಲು ಬೆಳದಿಂಗಳು ಕಾಲಂನಲ್ಲಿ ಈ ಪುಸ್ತಕದ ಬಗ್ಗೆ ಬರೆಯುವ ಮೂಲಕ ಎಲ್ಲರಿಗೂ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅವರು ಬರೆಯುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಈಗ ಬರೆದು ಆಶೀರ್ವದಿಸಿದ್ದಾರೆ. ಗುರುಗಳಿಗೆ ನಮಸ್ಕಾರಗಳು.
ಬಿಸಿಲು ಬೆಳದಿಂಗಳು ಅಂಕಣದಲ್ಲಿ ಗುರುಗಳು ಬರೆದದ್ದು ಇಲ್ಲಿದೆ. ಓದಿ ನಿಮ್ಮ ಅನಿಸಿಕೆ ತಿಳಿಸಿ.
(ಇದನ್ನು ದೊಡ್ಡದಾಗಿ ನೋಡಲು ಲೇಖನದ ಮೇಲೆ ಕ್ಲಿಕ್ ಮಾಡಿ)

Wednesday, February 18, 2009

ಇಸ್ರೋಗೆ ಹೆಚ್ಚಿನ ಅನುದಾನ:


ಕೇಂದ್ರ ಬಜೆಟ್ ಗೆ ಎಲ್ಲೆಡೆಯಿಂದ ವ್ಯಾಪಕ ಟೀಕೆ ಎದುರಾಗಿದೆ. ಆದರೆ ಒಂದು ಸಂತಸದ ವಿಷಯ ಎಂದರೆ 'ಇಸ್ರೋ'ಗೆ ನೀಡುತ್ತಿದ್ದ ಅನುದಾನವನ್ನು ಶೇ. 27 ರಷ್ಟು ಹೆಚ್ಚಿಸಲಾಗಿದೆ.
ಈ ಅನುದಾನದಲ್ಲಿ ಹೆಚ್ಚಿನ ಹಣವನ್ನು ಚಂದ್ರಯಾನ ಯೋಜನೆಗಳಿಗೆ ಸೆಮಿ ಕ್ರಯೋಜೆನಿಕ್ ಎಂಜಿನ್ ನಿರ್ಮಾಣ, ಇನ್ನೂ ಭಾರೀ ಗಾತ್ರದ, ಭಾರದ ಉಪಗ್ರಹಗಳನ್ನು ಹಾರಿ ಬಿಡಲು ಅನುಕೂಲವಾಗುವ ಉಡಾವಣಾ ವಾಹನಗಳನ್ನು ನಿರ್ಮಿಸಲು ಬಳಸಲಾಗುವುದು.
ಕಳೆದ ವರ್ಷ ಇಸ್ರೋಗೆ 3,499 ಕೋಟಿ ನೀಡಲಾಗಿತ್ತು. ಈ ಬಾರಿ 960 ಕೋಟಿ ಹೆಚ್ಚಳ ಮಾಡಿ, ಒಟ್ಟು 4,459 ಕೋಟಿ ಹಣ ನೀಡಲಾಗುತ್ತಿದೆ. ಭವಿಷ್ಯದ ಯೋಜನೆಗಳಿಗೆ ಅವಶ್ಯವಾಗುವ ಸೆಮಿ ಕ್ರಯೋಜೆನಿಕ್ ಎಂಜಿನ್ ಅಭಿವೃದ್ಧಿಗೆ ಕಳೆದ ವರ್ಷ ಕೇವಲ 4.09 ಕೋಟಿ ನೀಡಲಾಗಿತ್ತು. ಈ ಬಾರಿ ಇದಕ್ಕಾಗಿ 75 ಕೋಟಿ ನೀಡಲಾಗುತ್ತಿದೆ. ಚಂದ್ರಯಾನಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಕಳೆದ ವರ್ಷ 88 ಕೋಟಿ ನೀಡಿದ್ದರೆ ಈ ವರ್ಷ 90 ಕೋಟಿ ಬಳಕೆ ಮಾಡಬಹುದು. ಎಸ್ ಎಲ್ ವಿ ಮಾರ್ಕ್ -3 ಉಡಾವಣಾ ವಾಹನ ಅಭಿವೃದ್ಧಿಗೆ 217 ಕೋಟಿ ನೀಡಲಾಗುತ್ತಿದೆ. ಇದು ಪೂರ್ತಿ ಸಿದ್ಧವಾದರೆ ಸಾಕಷ್ಟು ಭಾರದ ಉಪಗ್ರಹಗಳನ್ನು ಹಾರಿ ಬಿಡಬಹುದು.
ಇದರಲ್ಲಿ ಪ್ರಮುಖವಾಗಿ ಮಾನವ ಸಹಿತ ನೌಕೆ ಕಳುಹಿಸಲು ಬೇಕಾದ ಯೋಜನೆಗೆ ಚಾಲನೆ ನೀಡಿದ್ದು, ಇದಕ್ಕಾಗಿ 50 ಕೋಟಿ ನಿಗದಿ ಪಡಿಸಲಾಗಿದೆ.