Wednesday, January 28, 2009

ಕಲಾಂರಿಂದ ಚಂದ್ರಯಾನ ಪುಸ್ತಕ ಬಿಡುಗಡೆ


ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಚಂದ್ರಯಾನ ಪುಸ್ತಕವನ್ನು ನವದೆಹಲಿಯಲ್ಲಿ ಜನವರಿ 27 ರಂದು ಬಿಡುಗಡೆ ಮಾಡಿದರು. ದಿ ವೀಕ್ ರೆಸಿಡೆಂಟ್ ಎಡಿಟರ್ ಸಚ್ಚಿದಾನಂದ ಮೂರ್ತಿ ಹಾಗೂ ಶಿವಪ್ರಸಾದ್ ಉಪಸ್ಥಿತರಿದ್ದಾರೆ.



ನವದೆಹಲಿ, ಜ. 27: ಚಂದ್ರನ ಮೇಲೆ ಮನುಷ್ಯ ಹೋಗಬಹುದು ಎಂದು 1860 ರಷ್ಟು ಹಿಂದೆಯೇ ಕಾನ್ಸ್ಟಾಂಟಿನ್ ಟಿಶೆಲ್ಸ್ ಎಂಬ ವ್ಯಕ್ತಿ ನಿಖರವಾಗಿ ಊಹಿಸಿ ಹೇಳಿದ್ದ ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಇಂದು ಇಲ್ಲಿ ಹೇಳಿದರು.
ಅವರು, ಪತ್ರಕರ್ತ ಶಿವಪ್ರಸಾದ್ ಬರೆದಿರುವ ಚಂದ್ರಯಾನ ಪುಸ್ತಕವನ್ನು ಮಂಗಳವಾರ ನವದೆಹಲಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
ಕಾನ್ಸ್ಟಾಂಟಿನ್ ಕಿವುಡನಾಗಿದ್ದ. ಆದರೆ ಅಧ್ಯಯನದಲ್ಲಿ ಅತೀವ ಆಸಕ್ತಿ ಹೊಂದಿದ್ದ. ತನ್ನ ಅಧ್ಯಯನದಿಂದ ವಿವಿಧ ಸಮೀಕರಣಗಳನ್ನು ರಚಿಸಿದ್ದ. ಆ ಮೂಲಕ ಚಂದ್ರನ ಮೇಲೆ ಮನುಷ್ಯ ಹೋಗಬಹುದು ಎಂದು ತಿಳಿಸಿದ್ದ. ಇಂದು ಆತನ ಊಹೆ ನಿಜವಾಗಿದೆ. ನಾವು ಚಂದ್ರನ ಮೇಲೆ ಹೊಗಿ ಬಂದಿದ್ದೇವೆ. ಹೀಗಾಗಿ ಚಂದ್ರಯಾನದ ಕಲ್ಪನೆಯ ಜನಕ ಕನ್ಸ್ಟಾಂಟಿನ್ ಎಂದರು.
ಪುಸ್ತಕ ಬಿಡುಗಡೆ ಮಾಡಿದ ನಂತರ ಪ್ರಥಮ ಪ್ರತಿಯನ್ನು ದಿ ವೀಕ್ ನ ಸ್ಥಾನಿಕ ಸಂಪಾದಕರಾದ ಕೆ.ಎಸ್. ಸಚ್ಚಿದಾನಂದ ಮೂರ್ತಿ ಅವರಿಗೆ ನೀಡಿದರು. ನಂತರ ಪುಸ್ತಕದಲ್ಲಿನ ವಿವಿಧ ಅಧ್ಯಾಯಗಳ ಬಗ್ಗೆ ಮಾಹಿತಿ ಪಡೆದರು.
ಚಂದ್ರಯಾನ ಉಡ್ಡಯನದ ನಂತರ ಅಮೇರಿಕಾದ ನಾಸಾ, ಒಬಾಮಾ ನೀಡಿದ್ದ ಪ್ರತಿಕ್ರಿಯೆ ಹಾಗೂ ಆ ಬಗ್ಗೆ ಮಾಧವನ್ ನಾಯರ್ ನೀಡಿದ್ದ ವಿವರಣೆ ಇರುವ ಅಧ್ಯಾಯವನ್ನು ಲೇಖಕ ಶಿವಪ್ರಸಾದ್ ಅವರಿಂದ ಓದಿಸಿ, ವಿವರಣೆ ಪಡೆದರು.
ನಂತರ ಮತ್ತೋರ್ವ ಪತ್ರಕರ್ತ ವಿನಾಯಕ್ ಭಟ್ ಬರೆದಿದ್ದ ದಿ ಗ್ರೇಟ್ ಮೂನ್ ಹೋಕ್ಸ್-1835 ಅಧ್ಯಾಯದ ಬಗ್ಗೆಯೂ ವಿವರಣೆ ಪಡೆದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿನಾಯಕ್ ಭಟ್ ಅವರಿಗೆ ಅವರ ಲೇಖನದಲ್ಲಿದ್ದ ಫೋಟೋ ತೋರಿಸಿ, ಈ ಬಗ್ಗೆ ವಿವರಣೆ ಕೇಳಿ ಆನಂದಿಸಿದರು.
'ಚಂದ್ರಯಾನ ಪುಸ್ತಕ ಬರೆಯಲು ಒಂದು ವರ್ಷ ತೆಗೆದುಕೊಂಡಿದ್ದೀರಿ. ಐತಿಹಾಸಿಕ ಯೋಜನೆಯಾದ ಚಂದ್ರಯಾನ ಕುರಿತ ಸಮಗ್ರ ವಿವರ ಇರುವ ಪುಸ್ತಕವನ್ನು ಹೊರ ತಂದಿರುವುದು ಉತ್ತಮ ಪ್ರಯತ್ನ' ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ 'ಪ್ರಜಾವಾಣಿ' ವಿಶೇಷ ಪ್ರತಿನಿಧಿ ದಿನೇಶ್ ಅಮಿನ್ ಮಟ್ಟು, 'ಡೆಕ್ಕನ್ ಹೆರಾಲ್ಡ್' ಸ್ಥಾನಿಕ ಸಂಪಾದಕ ಬಿ.ಎಸ್. ಅರುಣ್, 'ವಿಜಯ ಕರ್ನಾಟಕ' ದೆಹಲಿ ಪ್ರತಿನಿಧಿ ವಿನಾಯಕ್ ಭಟ್, ಕರ್ನಾಟಕ ವಾರ್ತಾ ಕೇಂದ್ರದ ಸಹಾಯಕ ನಿರ್ದೆಶಕ ವೀರಣ್ಣ ಕಮ್ಮಾರ, ಸುವರ್ಣ ಚಾನೆಲ್ ವರದಿಗಾರ ಪ್ರಶಾಂತ್ ನಾತೂ ಉಪಸ್ಥಿತರಿದ್ದರು.

No comments: